ಎಲ್ಲ ದರ್ಜೆಗಳು: ಕಾಳಗವೆಸಗುವ ಎಲ್ಲ ಯೋಧರಿಗೂ ರಕ್ಷಣಾ ಬಲಗಳಲ್ಲಿ ಬಳಸುವ ಸಾಮಾನ್ಯ ಹೆಸರು (ಆಲ್ ರ್ಯಾಂಕ್ಸ್‌). ರಕ್ಷಣಾ ಬಲಗಳಲ್ಲಿ ಕಾಳಗವೆಸವಗುವವರು (ಕಾಂಬಟೆಂಟ್ಸ್‌) ಮತ್ತು ಕಾಳಗವೆಸಗದವರು (ನಾನ್-ಕಾಂಬಟೆಂಟ್ಸ್‌) ಎಂಬ ಎರಡು ಪ್ರಧಾನವರ್ಗಗಳಿವೆ. ಬಾಣಸಿಗರು, ಮೋಚಿ, ದರ್ಜಿ, ನಾಪಿತ ಮುಂತಾದ ವಿವಿಧ ಸೇವಾ ವರ್ಗದವರು, ಗುಮಾಸ್ತರು, ವಿವಿಧ ಮತಗಳ ಪುರೋಹಿತರು ಎರಡನೆಯ ವರ್ಗಕ್ಕೆ ಸೇರಿದವರು. ಕಾಳಗದ ಸ್ಥಳ, ಉದ್ದೇಶ, ಸ್ವಭಾವ ಮುಂತಾದವನ್ನು ಅನುಸರಿಸಿ ರಕ್ಷಣಾ ಬಲಗಳಲ್ಲಿ ಮೂರು ವಿಭಾಗಗಳಿವೆ: ಸೈನ್ಯ(ನೆಲ), ನೌಕೆ(ಜಲ), ವಿಮಾನ(ಗಾಳಿ). ಇವೆಲ್ಲವುಗಳಲ್ಲಿಯೂ ಎರಡು ಮುಖ್ಯ ಅಂತಸ್ತಿನ ದರ್ಜೆಗಳಿವೆ: ಕಮಿಷನ್ ನೀಡಿದ ಅಧಿಕಾರಿಗಳು (ಕಮಿಷನ್ಡ್‌ ಆಫಿಸರ್ಸ್‌), ಕಮಿಷನ್ ನೀಡದ ಅಧಿಕಾರಿಗಳು (ನಾನ್ಕಮಿಷನ್ಡ್‌ ಆಫಿಸರ್ಸ್‌). ಸೈನ್ಯದಲ್ಲಿ ಮಾತ್ರ ಮೂರನೆಯದೂ ಒಂದು ಅಂತಸ್ತು ಇದೆ-ಕಿರಿಯ ಕಮಿಷನ್ ನೀಡಿದ ಅಧಿಕಾರಿಗಳು (ಜೂನಿಯರ್ ಕಮಿಷನ್ಡ್‌ ಆಫಿಸರ್ಸ್‌) ಎಂಬ ಒಂದು ದರ್ಜೆ ಮೇಲೆ ಹೇಳಿದ ಎರಡು ಅಂತಸ್ತುಗಳ ನಡುವೆ ಇದೆ. ಈ ದರ್ಜೆಗಳ ಸಂಕ್ಷೇಪರೂಪಗಳು ಐಸಿಓ (ಇಂಡಿಯನ್ ಕಮಿಷನ್ಡ್‌ ಆಫಿಸರ್ಸ್‌), ಜೆಸಿಓ (ಜೂನಿಯರ್ ಕಮಿಷನ್ಡ್‌ ಆಫಿಸರ್ಸ್‌), ಎನ್ಸಿಓ (ನಾನ್ಕಮಿಷನ್ಡ್‌ ಆಫಿಸರ್ಸ್‌). ಒಂದೊಂದು ವಿಭಾಗದ ಸಮವಸ್ತ್ರದ ಬಣ್ಣ ಒಂದೊಂದು.
ಒಂದೊಂದು ಸೈನ್ಯದ್ದು, ಆಲಿವ್ ಹಸಿರು (ಆಲಿವ್ ಗ್ರೀನ್ ಸಂಕ್ಷೇಪ ರೂಪ ಓಜಿ), ನೌಕೆಯದು ಬಿಳಿ, ವಿಮಾನದ್ದು ಖಾಕಿ. ಇಷ್ಟುಮಾತ್ರವಲ್ಲ ಒಂದೊಂದು ಅಂತಸ್ತಿನವರನ್ನೂ ಆ ಅಂತಸ್ತಿನಲ್ಲಿ ಅವರ ಸ್ಥಾನವನ್ನೂ ಗುರುತಿಸಲು ಅನುಕೂಲವಾಗು ವಂತೆ ವಿಶಿಷ್ಠ ಭುಜ ಅಥವಾ ಕಂಕಣ ತೊಡುಗೆಗಳನ್ನು ಅಧಿಕಾರಿಗಳು (ಸಮವಸ್ತ್ರಧಾರಿ ಗಳಾಗಿರುವಾಗ) ಧರಿಸಲೇಬೇಕು. ಇವುಗಳ ವಿವರಗಳನ್ನು ಚಿತ್ರದಲ್ಲಿ ತೋರಿಸಿದೆ.
ರಕ್ಷಣಾ ಬಲಗಳ ಮೂರು ವಿಭಾಗಗಳ ಸಮಾನ ದರ್ಜೆಗಳನ್ನು 89ನೆಯ ಪುಟದ ಪಟ್ಟಿಯಲ್ಲಿ ಬರೆದಿದೆ.			    (ಎ.ಎನ್.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ